Friday, 22 December 2017

#ಮರ್ಕಝಿನತ್ತ_ಸೈಕಲ್_ತುಳಿಯುತ್ತಿರುವ_ಸಾಗರದ_ವೃದ್ಧ.


ಇವರು ಮೂಲತ ಕೇರಳದ ಕೊಲ್ಲಂನವರು. ವಯಸ್ಸು ಎಂಬತ್ತು ದಾಟಿದೆ. ಕಳೆದ ನಲ್ವತ್ತೈದು ವರ್ಷಗಳಿಂದ ಸಾಗರದಲ್ಲಿ ವಾಸವಿದ್ದಾರೆ. ಇದೀಗ ಪ್ರಾಯಾಧಿಕ್ಯವನ್ನೇನೂ ಲೆಕ್ಕಿಸದೆ ಮರ್ಕಝಿನತ್ತ ಸೈಕಲ್ ತುಳಿಯುತ್ತಿದ್ದಾರೆ. ಜನವರಿ 4,5,6,7ರಂದು ನಡೆಯುವ ಜಗದ್ವಿಖ್ಯಾತ ವಿದ್ಯಾ ಸಮುಚ್ಚಯ ಜಾಮಿಅ ಮರ್ಕಝಿನ ಐತಿಹಾಸಿಕ ನಲ್ವತ್ತನೇ ವಾರ್ಷಿಕ ರೂಬೀ ಜುಬಿಲೀ ಸಮ್ಮೇಳನದ ಪ್ರಚಾರಾರ್ಥ. ಕಳೆದ ಸೋಮವಾರ ಹೊರಟ ಯಾತ್ರೆ ಇವತ್ತು(ಶನಿವಾರ)ಮೂಡಬಿದ್ರೆ ತಲುಪಿದೆ. ದಿನಕ್ಕೆ ಐವತ್ತು-ಐವತ್ತೈದು ಕಿ.ಮೀ ಕ್ರಮಿಸುತ್ತಾರಂತೆ.





ಯಾವಾಗ ಮರ್ಕಝ್ ತಲುಪಬಹುದೆಂಬ ಪ್ರಶ್ನೆಗೆ "ಎಲ್ಲವೂ ಅಲ್ಲಾಹನ ಇಚ್ಚೆಯಂತೆ" ಎಂಬ ಉತ್ತರ. ಇಂತಹ ಸೈಕಲ್ ಸಾಹಸಿಕ ಯಾತ್ರೆ ಇದೇ ಮೊದಲಲ್ಲ. ಮರ್ಕಝಿಗೆ ಈ ಮೊದಲೊಮ್ಮೆ ತೆರಳಿದ್ದಾರೆ. ದೂರದ ಮುತ್ತುಪೇಟೆ,ನಾಗೂರ್ ವರೆಗೂ ಸೈಕಲಲ್ಲೇ ಹೋಗಿ ಬಂದಿದ್ದಾರೆ. ಶೈಖುನಾ ಎ.ಪಿ ಉಸ್ತಾದರ ಆಶೀರ್ವಾದ ಪಡೆದ ಬಳಿಕವೇ ಆ ಯಾತ್ರೆ ಕೈಗೊಂಡದ್ದಂತೆ. ಶೈಖುನಾ ಸುಲ್ತಾನುಲ್ ಉಲಮಾ ಎ.ಪಿ ಉಸ್ತಾದರ ಮೇಲಿರುವ ಪ್ರೀತಿಯೇ ಇದಕ್ಕೆ ಪ್ರೇರಣೆಯೆನ್ನುತ್ತಾರೆ. ತನ್ನ ಪುರುಷಾಯುಸ್ಸನ್ನಿಡೀ ಸಮುದಾಯದ ಸಮುದ್ಧಾರಕ್ಕಾಗಿ ವ್ಯಯಿಸಿದ ಉಸ್ತಾದರ ಬಗ್ಗೆ ಮಾತನಾಡಲು ಪ್ರಾರಂಭಿಸಿದರೆ ನೂರು ನಾಲಗೆ. ಕೊನೆಗೆ ತನ್ನನ್ನೇ ಮರೆತು "ನೀವೆಲ್ಲರೂ ಎ.ಪಿ ಉಸ್ತಾದರಿಗಾಗಿ,ಮರ್ಕಝಿಗಾಗಿ ದುಆ ಮಾಡಿ" ಎನ್ನುತ್ತಾ ಭಾವುಕರಾಗಿ ಬಿಡುತ್ತಾರೆ.
ಇವತ್ತು ಸುಬ್ ಹಿ ನಮಾಜಿಗೆ ದ್ಸಿಕ್ರಾದ ವಿದ್ಯಾರ್ಥಿಗಳ ಜೊತೆಗಿದ್ದರು. ಈ ಪ್ರಾಯಾಧಿಕ್ಯದ ಸಂದರ್ಭದಲ್ಲೂ ಎ.ಪಿ ಉಸ್ತಾದರಿಗೆ ಬೆಂಬಲವಾಗಿ,ಮರ್ಕಝಿನ ಪ್ರಚಾರ ಕೈಗೊಂಡಿರುವ ಇಬ್ರಾಹಿಂ ಸಾಹೇಬ್ ರವರನ್ನು ದ್ಸಿಕ್ರಾದ ವತಿಯಿಂದ ಶಾಲು ಹೊದಿಸಿ,ಸನ್ಮಾನಿಸಿ ಬೀಳ್ಕೊಟ್ಟೆವು.
ಇಂತಹ ನಿಷ್ಕಳಂಕ ವ್ಯಕ್ತಿಗಳ ನಿಸ್ವಾರ್ಥ ಪ್ರಾರ್ಥನೆ ಮತ್ತು ಬೆಂಬಲಗಳೇ ಇವತ್ತು ಶೈಖುನಾ ಮತ್ತು ಮರ್ಕಝಿನ ಆಸ್ತಿ. ಈ ರೀತಿ ಲಕ್ಷಗಟ್ಟಲೆ ವಿಶ್ವಾಸಿ ಸಮೂಹವು ಶೈಖುನಾರನ್ನೂ,ಮರ್ಕಝನ್ನೂ ಹೃದಯದಲ್ಲಿ ಜೋಪಾನವಾಗಿ ಕಾಪಿಟ್ಟು ಕೊಳ್ಳಲು ಶೈಖುನಾ ಈ ಸಮುದಾಯಕ್ಕಾಗಿ ಸಮರ್ಪಿಸಿದ ಅನೂಹ್ಯವಾದ ಸಾಧನೆಗಳೇ ಕಾರಣ. ಮರ್ಕಝ್ ಅದೊಂದು ಇತಿಹಾಸವಾಗಿ,ಅಳಿಸಲಾರದ ಪರಂಪರೆಯಾಗಿ ಜನಮನಸ್ಸುಗಳಲ್ಲಿ ಬೇರೂರಿಬಿಟ್ಟಿದೆ.



ಅಲ್ಲಾಹ್...ಶೈಖುನಾರಿಗೆ ಆಫಿಯತ್,ದೀರ್ಘಾಯುಷ್ಯ ಕರುಣಿಸು.ಅವರ ಅನುಪಮ ಸೇವೆಯ ಹಾದಿಗಳಲ್ಲಿ ಬೆಂಬಲ,ಸಹಾಯಗಳೊಂದಿಗೆ ಬೆನ್ನೆಲುಬಾಗಿ ನಿಲ್ಲುವ ಸರ್ವರಿಗೂ ನೀನು ಒಳಿತುಗಳನ್ನನುಗ್ರಹಿಸು....ಆಮೀನ್.
*ಸಖಾಫಿ ಜೀರ್ಮುಕ್ಕಿ*

No comments:

Post a Comment

thank you

Popular Posts

Blog Archive